ಹುಟ್ಟುತ್ತ ಬಾವಿಕಪ್ಪೆಗೆ ಅದೇನೆ ಸಾಗರ
ಹೊರಗೆ ಕಾಲನಿಡುವ ತನಕ ಜಗವೆ ಸುಂದರ
ಸಂಜೆಯ ಮಿಂಚುಹುಳುವಿಗೆ ಬೆನ್ನಲ್ಲೆ ನೇಸರ
ಬೆಳೆದು ಗಗನ ತಲುಪಿ ಜಗವ ಬೆಳಗುವಾತುರ
ಮೇಲೇರುವಾಸೆ ಹೊತ್ತುಕೊಂಡು ಹತ್ತು ಸಾವಿರ
ಕಟ್ಟೋರೆ ಎಲ್ಲ ಮೆಟ್ಟಿಲಿರದ ಗಾಳಿಗೋಪುರ
ಭ್ರಮೆಯ ಭ್ರಮರ ಹಾಡುತಿರಲು ರಾಗ ಸುಮಧುರ
ನಿಜವ ತಿಳಿಸೊ ಗಾಳಿ ಬೀಸಲು ಅದುವೆ ಅಪಸ್ವರ
ಕತ್ತು ಎತ್ತಿ ನೋಡುವಾಗ ಬಾನು ಹತ್ತಿರ
ರೆಕ್ಕೆ ಕಟ್ಟಿ ಹಾರಿಬಿಡಲು ತಿಳಿವುದೆತ್ತರ
||ಹುಟ್ಟುತ್ತ ಬಾವಿಕಪ್ಪೆಗೆ ಅದೇನೆ ಸಾಗರ
ಹೊರಗೆ ಕಾಲನಿಡುವ ತನಕ ಜಗವೆ ಸುಂದರ||
ಜಿದ್ದಿನಲ್ಲಿ ಬಿದ್ದು ನಡೆವ ಎರಡು ಕಾಲ್ಗಳು
ಒಂದೆ ದಿಕ್ಕು ಹಿಡಿಯಬೇಕು ಮುಂದೆ ಸಾಗಲು
ಬದಿಗಿಡೊ ಹತಾಶಯ ಸದಾಶಯ ಅದೇ ಜಯ
ಕಟ್ಟಿ ಹೇಳಲಾಗದ ಕತೆಯು ಜೀವನ
ಕಟ್ಟಿ ಹಾಕಲಾಗದು ಕಪಿಯು ಯೌವ್ವನ
ಹೆದರದೆಲೆ ಹುರುಪಿ ನಲಿ ಮುಂದೆ ನಡೆವುದು
ಹೊಸ ತಿರುವು ಎದುರಿರಲು ಬೆದರಿ ನಿಲ್ಲುವುದು
|| ಹುಟ್ಟುತ್ತ ಬಾವಿಕಪ್ಪೆಗೆ ಅದೇನೆ ಸಾಗರ
ಹೊರಗೆ ಕಾಲನಿಡುವ ತನಕ ಜಗವೆ ಸುಂದರ
ಸಂಜೆಯ ಮಿಂಚುಹುಳುವಿಗೆ ಬೆನ್ನಲ್ಲೆ ನೇಸರ
ಬೆಳೆದು ಗಗನ ತಲುಪಿ ಜಗವ ಬೆಳಗುವಾತುರ ||