Blog

ಚಿತ್ರದುರ್ಗದ ಏಳು ಸುತ್ತಿನ ಕೋಟೆ ಯಾರಿಗೆ ಗೊತ್ತಿಲ್ಲ ಹೇಳಿ..

05 Aug 2020
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಯಾರಿಗೆ ಗೊತ್ತಿಲ್ಲ ಹೇಳಿ..

"ಕನ್ನಡ ನಾಡಿನ ವೀರರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ...
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ..... "

 

ನಾಗರಹಾವು ಚಿತ್ರದ ಈ ಹಾಡು ಕೋಟೆಯನ್ನು ಎಲ್ಲರಿಗೂ ಪರಿಚಯಿಸಿದ ಹಾಡು..ಚಿತ್ರದುರ್ಗನ ಕೋಟೆನಾ ಒಂದ್ಸಲ ನೋಡ್ಕೊಂಡು ಬರೋಣ ಅನ್ಸೋ ತರ ಮಾಡಿದ್ದು ಈ ಹಾಡು. ನನ್ನ ಮಗನಿಗೂ ಈ ಹಾಡು ಇಷ್ಟ ಅವನು ಈ ಹಾಡನ್ನು ಕೇಳಿದ ಮೇಲೆ ಕೋಟೇನ ಹತ್ತಲೇ ಬೇಕು ಅಂತ ಹಠ ಮಾಡಿ ಮನೆಯವರನ್ನೆಲ್ಲ ಹೊರಡ್ಸಿದ್ದು ಮರೆಯೋಕೆ ಆಗಲ್ಲ.. ಅಲ್ಲಿ ಹೋಗಿ ಈ ಹಾಡನ್ನ ಕೋಟೆ ಹತ್ತುತ್ತ ಹೇಳ್ತಾ ಇದ್ದ ಆಗ ಅಲ್ಲಿ ಕೋಟೆ ನೋಡೋಕೆ ಬಂದ ಎಷ್ಟೋ ಜನ ನನ್ನ ಮಗನ ಜೊತೆಗೆ ಫೋಟೋ ತಗೊಂಡು ಹೋದ್ರು.. ಕೇವಲ ನನ್ನ ಮಗ ಮಾತ್ರ ಅಲ್ಲ ಈ ಹಾಡನ್ನ ಕೇಳಿದ ಮಕ್ಕಳು ಇಲ್ಲಿ ನೋಡ್ಲೇಬೇಕು ಅಂತ ಬಂದಿರೋ ನಿದರ್ಶನ ಬಹಳ ಇದೆ..


ನಮ್ಮದು ದುರ್ಗನೇ ಹಾಗಾಗಿ ಕೋಟೆ ನನಗೆ ಹೊಸದಲ್ಲ, ದುರ್ಗದವರಿಗೆ ಕೋಟೆಯೇ ಪ್ರಪಂಚ ಮತ್ತೆ ಕೋಟೆಗೆ ಹೋಗೋಕೆ ಕಾರಣ ಅಂತ ಏನು ಬೇಕಾಗಿಲ್ಲ , ತುಸು ಖುಷಿಯಾದ್ರು, ಬೇಜಾರಾದ್ರೂ, ನೆಂಟರು ಬಂದ್ರು, ಹಳೆ ಫ್ರೆಂಡ್ಸ್ ಸಿಕ್ಕರೂ ಹೀಗೆ ಹೋಗೋದೇ ಕೋಟೆಗೆ, ಅದೆಷ್ಟು ಸಲ ಹತ್ತಿದೀವಿ ನಮಗೆ ಗೊತ್ತಿಲ್ಲ. ಒನಕೆ ಓಬ್ಬವ್ವನ ಕಿಂಡಿನ ಜನ ಈಗ್ಲೂ ಎಷ್ಟು ಆಸಕ್ತಿಯಿಂದ ನೋಡತಾರೆ ಯಾಕೆ ಅಂದ್ರೆ ನಮ್ಮೋರಿಗೆ ಇಡೀ ಕೋಟೆನೇ ಒಂದು ಅದ್ಭುತ ಆದ್ರೆ ಅದನ್ನಾ ನೋಡೋಕೆ ಅಂತ ಬರೋರಿಗೆ ಓಬವ್ವನ ಕಿಂಡಿ ಮೇಲೆ ಕಣ್ಣು ಯಾಕಂದ್ರೆ ಅವ್ರೆಲ್ಲ ಈ ಹಾಡನ್ನ ಕೇಳಿ ಬಂದಿರ್ತಾರೆ.. ನನಗೆ ಈ ಹಾಡು ಕೇಳಿದಾಗ ಮೈರೋಮಾಂಚನ ಆಗುತ್ತೆ, ರಾಷ್ಟ್ರಗೀತೆ ಹಾಡುವಾಗ ಆಗೋ ಪುಳಕವೇ ಆಗುತ್ತೆ. ಅದು ದೇಶಭಕ್ತಿ ಗೀತೆ, ಇದು ನಮ್ಮ ದುರ್ಗದ ಕೋಟೆಯ ಮೇಲಿನ ಅಭಿಮಾನ ಹೆಚ್ಚಿಸೋ ಗೀತೆ..ಹಾಡಿನಲ್ಲೇ ಕೋಟೆ ಯ ಬಗ್ಗೆ ಬಹಳ ಚನ್ನಾಗಿ ತಿಳ್ಸಿದ್ದಾರೆ. ದೇವ್ರೆ ದೇವ್ರೆ..... ಎಂಥ ಹಾಡೋ ಇದು ರಾಮಾಚಾರಿ.. ಇದೇನಿದು ದೇವ್ರೆ ದೇವ್ರೆ ಅಂತೀರಾ.. ಇದು ರಾಮಾಚಾರಿ ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರ ಹೆಂಡತಿ ಆಗಿ ಅಭಿನಯಿಸಿರೋ ಲೀಲಾವತಿ ಅಮ್ಮನ ಡೈಲಾಗ್. ಅವ್ರು ಸಿನಿಮಾ ಪೂರ್ತಿ ದೇವ್ರೆ ದೇವ್ರೆ ಅಂತಾನೆ ರಾಮಾಚಾರಿಗಾಗಿ ಪರಿತಪಿಸ್ತಾ ಇರೋದು. ಇದೇನು ಹಾಡಿನ ಸಾಲು ಬಿಟ್ಟು ಸಿನಿಮಾದ ಡೈಲಾಗ್’ಗೆ ಹೋದೆ ಅನ್ಕೋಬೇಡಿ.. ಈ ಸಿನಿಮಾನೇ ಹಾಗಿದೆ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಈ ಚಿತ್ರದ ಪ್ರತಿ ಹಾಡು, ಸಾಹಿತ್ಯ, ಸಂಭಾಷಣೆ, ಸಂಗೀತ, ಎಲ್ಲದರ ಬಗ್ಗೆ ನಾವು ಮಾತಾಡೋಕೆ ಬಹಳ ಸಣ್ಣೊರಾಗತೀವಿ.. ಅಷ್ಟು ಅದ್ಭುತವಾದ ಚಿತ್ರ..

 

 ಇನ್ನು ಈ ಹಾಡು. ಏನ್ ಹೇಳೋದು ದುರ್ಗದವಳೇ ಆದ ನನಗೆ ಇದು ಹೆಮ್ಮೆಯ ಗೀತೆ.. ಮೈಯಲ್ಲಿ ಓಬ್ಬವ್ವನೇ ಬಂದು ಕೂತ ಅನುಭವ..ಆ ಕಿಚ್ಚು ನಮ್ಮ ನಾಡನ್ನ ಕೋಟೆಯನ್ನ ಉಳಿಸಿಕೊಳ್ಳೋಕೆ ಅವಳು ಮಾಡಿದ ಹೋರಾಟ, ಗಂಡನಿಗಾಗಿ ಮಿಡಿಯುವ ಹೃದಯ, ಅವನ ಉಪಚಾರ, ಅದಕ್ಕೆ ದಕ್ಕೆಯಾಗದೆ ಇರುವ ಹಾಗೆ ಕೋಟೆಗೆ ಬರುವ ಶತ್ರುಗಳ ನಾಶಕ್ಕೆ ತಾನೆ ಮುನ್ನುಗುವ ರೀತಿ.. ಛೆ!!.. ನಾನು ಚಿತ್ರದುರ್ಗದ ಮಣ್ಣಿನ ಹೆಣ್ಣು ಅನ್ನೋಕೆ ಹೆಮ್ಮೆ ಆಗುತ್ತೆ.. ಇನ್ನು ಆ ಗೀತೆಯಲ್ಲಿ ಬರುವ ನೀಲಿ ಲಂಗ ಬಿಳಿ ಜಾಕೀಟಿನ ಹುಡುಗಿಯರು ನಾನು ಓದಿದ ಶಾಲೆಯ ಆಗಿನ ಕಾಲದ ಹುಡುಗಿಯರು.. ಹಾಗಾಗಿ ಅತೀ ಪ್ರೀತಿ ಪಾತ್ರವಾದ ಹಾಡು ಇದು.. ವಿಷ್ಣುವರ್ಧನ್ ಅವರ ಅಭಿನಯ, ಅಭಿನಯ ಶಾರದೆ ಅಂತಾನೆ ಅನ್ನಿಸಿ ಕೊಂಡಿರುವ ಜಯಂತಿ ಅಮ್ಮನವರ ಅಭಿನಯ ಅವರ ಕೋಪದ ಕಣ್ಣುಗಳು ಆ ರಭಸ, ಕಚ್ಛೆ ಕಟ್ಟಿ ವೈರಿ ರುಂಡ ಚಂಡಾಡಿದ ವೀರ ವನಿತೆ ಓಬವ್ವನ ಪಾತ್ರ.. ಎಂಥ ಗುಂಡಿಗೆಯನ್ನು ಅಲ್ಲಾಡಿಸುವಂತಿದೆ.. ಈಗಲೂ ಒನಕೆ ಓಬ್ಬವ್ವ ಅಂದ್ರೆ ಜಯಂತಿ ಅಮ್ಮನವರ ತಿಳಿ ಗುಲಾಬಿ ಬಣ್ಣದ ಕಚ್ಛೆ ಸೀರೆ ಆ ರೌದ್ರಾವತಾರ ತಾಳಿದ ಕಣ್ಣುಗಳೇ ನಮ್ಮ ಕನ್ನಡ ಮುಂದೆ ಬರೋದು.. ಹೋರಾಡಿ ಕೋಟೆ ನಾಡಿಗಾಗಿ ಪ್ರಾಣ ಬಿಟ್ಟ ಓಬ್ಬವ್ವನಿಗೆ ನನ್ನ ನಮನಗಳು...
ಚಿತ್ರದುರ್ಗದ ಪ್ರತಿ ಒಬ್ಬರಿಗೂ ಕೋಟೆ ಅಂದ್ರೆ ಎಷ್ಟು ಪ್ರೀತಿನೋ ಹಾಗೆ ಈ ಹಾಡು ಕೂಡ ಅಷ್ಟೆ ಪ್ರೀತಿ...
ವೀರ ವನಿತೆ ಆ ಓಬ್ಬವ್ವ ದುರ್ಗವು ಮರೆಯದ ಓಬ್ಬವ್ವ……..

Please Login to View/Add comments

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ