Blog

ಲಾಲಿ ಹಾಡು

02 Oct 2022
ಲಾಲಿ ಹಾಡು

ಗೀತ ಸಾಹಿತ್ಯದಲ್ಲಿ ಶಿಶುಗೀತೆ ಅಥವಾ ಲಾಲಿ ಹಾಡುಗಳಿಗೆ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ ಎಂದು ಮನಸ್ಸಿಗೆ ಅನ್ನಿಸಿದರೂ ಶಿಶುಗೀತೆಗಳು ಬಹಳ ಮಹತ್ವದವು‌. ಬೆಳೆಯುವ ಎಳೆ‌ ಮನಸ್ಸಿನಲ್ಲಿ ಕಲ್ಪನಾಶಕ್ತಿ ಮೂಡಿಸಲು ಮತ್ತು ನಿಧಾನವಾಗಿ ಅದನ್ನು ಬೆಳೆಸಿಕೊಂಡು ಹೋಗಲು ಬಹಳ ಸಹಾಯಕಾರಿ. ಮಕ್ಕಳ ಸಾಹಿತ್ಯಕ್ಕಿಂತಲೂ ಸರಳವಾಗಿ ಮತ್ತು ರಾಗಬದ್ಧವಾಗಿ ಹಾಡಲು ಅನುಕೂಲವಾದಂತೆ ಇರಬೇಕಾದವು ಇವು. ಒಮ್ಮೆ ಅಭ್ಯಾಸವಾದರೆ ಅವು ಬೇಕೆ ಬೇಕು. ಅಷ್ಟು ಬೆಚ್ಚನೆಯ ಅನುಭವವನ್ನು ಅವು ನೀಡುತ್ತವೆ.

ನನಗೆ ಸುಮಾರು ನಾಲ್ಕು ವರ್ಷದವರೆಗೂ ಲಾಲಿ ಹಾಡೇ ಮಲಗಿಸಬೇಕಾಗಿತ್ತು. ಬೇರೆ ಬೇರೆ ಹಾಡುಗಳು ಬೇಕೆಂದಿಲ್ಲ. ಅದೇ ಯಾವತ್ತು ಹೇಳುವ ೩-೪ ಹಾಡುಗಳು. ನನಗೆ ಈಗ ನೆನಪಿರುವುದು ಎರಡು ಮಾತ್ರ. ಒಂದು ಲಾಲಿ ಲಾಲಿ ಸುಕುಮಾರ ಮತ್ತು ಇನ್ನೊಂದು ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ, ಪುನೀತ್ ರಾಜಕುಮಾರ್ ಅವರ ಭಾಗ್ಯವಂತ ಚಿತ್ರದ್ದು. ಅದರಲ್ಲೂ ಬಾನದಾರಿಯಲ್ಲಿ ನನಗೆ ಬೇಕೇ ಬೇಕಿತ್ತು. ದಶಕಗಳ ಕಾಲ ನನ್ನ ಸ್ಮೃತಿಪಟಲದಿಂದ ಮರೆಯಾಗಿದ್ದ ಆ ಗೀತೆ ಪುನಃ ನೆನಪಿಗೆ ಬಂದಿದ್ದು ನಮಗೆ ಮಗುವಾದಾಗಲೇ. ಮಗನಿಗೆ ಕೇಳಿಸಲು ಹಳೆಯ ಗಾನಗಳ ಹುಡುಕತೊಡಗಿದಾಗ.

ವಿಚಿತ್ರ ಅಂದರೆ ನನಗೆ ಅಲ್ಲಿಯವರೆಗೂ ಅದು ಚಿತ್ರವೊಂದರಲ್ಲಿ ಬರುವ ಗೀತೆ ಮತ್ತು ಅದನ್ನು ನಟಿಸಿ ಹಾಡಿದ್ದು ಪುನೀತ್ ರಾಜಕುಮಾರ್ ಅಂತ ಗೊತ್ತಿರಲೇ ಇಲ್ಲ (ಅಶ್ವತ್ಥ್ ಅವರ ಪಾತ್ರ ಹೇಳುವ ಹಾಡಿದ್ದರೂ ನನಗೆ ಹೆಚ್ಚು ಮೆಚ್ಚುಗೆಯಾಗಿದ್ದು ಪುನೀತ್ ಹಾಡಿದ ಹಾಡು). ಎಷ್ಟು ಸರಳವಾದ ಆದರೆ ಬಹಳ ಸುಂದರವಾದ ಸಾಹಿತ್ಯವಿದೆ ನೋಡಿ.

ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗುತಾರೆ ಅಂದ ನೋಡು ಎಂತ ಚಂದ ರಾತ್ರಿಯಾಯ್ತು ಮಲಗೊ ಕಂದ ನನ್ನ ಪುಟ್ಟ ಕಂದ. 

ಚೂರೂ ಆಡಂಬರವಿಲ್ಲದ ಚಂದದ ಪದಗಳು. ಸೂರ್ಯ ಮುಳುಗಿದ ಅನ್ನುವುದ‌ನ್ನು ಬಾನ ಅಂದರೆ ಆಕಾಶದ ದಾರಿಯಲ್ಲಿ ಸೂರ್ಯ ಜಾರಿ ಹೋದ. ಹಾಗೇ ಚಂದ್ರ ಮೂಡಿದ, ಚುಕ್ಕಿಗಳು ಹೊಳೆಯತೊಡಗಿದ ಚಂದ ವರ್ಣಿಸಿ ಮಗುವನ್ನು ಮಲಗಲು ಹೇಳುವ ರೀತಿಯನ್ನು ಗಮನಿಸಿ. ಬರೀ ಪಲ್ಲವಿ ಮಾತ್ರವಲ್ಲ. ಇಡೀ ಹಾಡಿನ ಸಾಹಿತ್ಯವೇ ಅಷ್ಟು ಸುಂದರವಾಗಿದೆ. 

ಈ ಹಾಡು ನನಗಷ್ಟು ಇಷ್ಟವೋ ನನ್ನ ಮಗನಿಗೂ ಅಷ್ಟೇ ಇಷ್ಟ. ಈಗಲೂ ಈ ಹಾಡನ್ನು ಕೆಲವೊಮ್ಮೆ ಕೇಳುತ್ತೇನೆ‌. ಆದರೆ ಈಗ ಇದನ್ನು ಕೇಳುವಾಗ ಬಾಲ್ಯದ ನೆನಪಿನ ಜೊತೆ ಪುನೀತ್ ಅವರ ಅಕಾಲಿಕ ಮರಣದ ನೆನಪೂ ಆಗಿ ಚಿಕ್ಕ ವಿಶಾದವೂ ಮೂಡುತ್ತದೆ.

Please Login to View/Add comments

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ